Description
ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಒಂದು ಪ್ರಯತ್ನ ‘ಪುಟ್ಟ – ಕಿಟ್ಟ ವಿಜ್ಞಾನ ಸಂವಾದ. ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ ಅದು ಹೀಗೇಕೆ?’ ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾದದ ರೂಪದಲ್ಲಿ ಸಮರ್ಪಕ ವಿವರಣೆ ನೀಡಿದ್ದಾರೆ.
ಡಾ|| ಆವಲ ಮೂರ್ತಿಯವರ ಬರವಣಿಗೆಯ ಶೈಲಿ ಆಕರ್ಷಕ, ವಿಷಯದ ನಿರೂಪಣೆ ನೇರ, ಸರಳ ಮತ್ತು ಸ್ಪಷ್ಟ. ಹಾಗಾಗಿ ಈ ಮಾಲೆಯ ಪುಸ್ತಕಗಳು ಮಕ್ಕಳನ್ನಷ್ಟೇ ಅಲ್ಲದೆ ಸಾಮಾನ್ಯ ಓದುಗರನ್ನು ಸಹ ಅಷ್ಟೇ ಪರಿಣಾಮಕಾರಿಯಾಗಿ ತಲುಪಲು ಸಾಧ್ಯ.
– ಡಿ. ಆರ್. ಬಳೂರಗಿ
ಡಾ|| ಎ. ಓ. ಆವಲ ಮೂರ್ತಿ ಅವರು ಭೌತ ವಿಜ್ಞಾನದ ವಿಶ್ರಾಂತ ಪ್ರಾಧ್ಯಾಪಕರು. ಕಳೆದ ಕೆಲವು ವರ್ಷಗಳಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಮಾಡಬೇಕು ಎಂಬುದನ್ನು ಕುರಿತು ಚಿಂತನೆ, ಅಧ್ಯಯನ, ಪ್ರಯೋಗಗಳು ಮತ್ತು ಬರವಣಿಗೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಲವು ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಬರೆದಿದ್ದಾರೆ. ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕುರಿತೇ ಸಂಶೋಧನ ಪ್ರಬಂಧವನ್ನು ಬರೆದು ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೆ, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವೆಲ್ಲದರ ಮುಂದುವರಿದ ಭಾಗವಾಗಿ, ಇಂದಿನ ಶಿಕ್ಷಣದಲ್ಲಿ ಇರುವ ಚಿಂತನಶೀಲತೆಯ ಕೊರತೆಯನ್ನು ಕಂಡುಕೊಂಡಿರುವ ಇವರು, ಮಕ್ಕಳಲ್ಲಿ ಚಿಂತನಶೀಲತೆಯನ್ನು ಮೈಗೂಡಿಸುವುದನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡು, ‘ಪುಟ್ಟ-ಕಿಟ್ಟ ಮಾಲಿಕೆ’ಯನ್ನು ರಚಿಸಿದ್ದಾರೆ.