Description
ಬೌದ್ಧಿಕ ಸಾಹಸಕ್ಕೆ ತಮ್ಮ ಎಳೆವರೆಯದಿಂದಲೇ ಪ್ರಸಿದ್ಧರಾಗಿದ್ದ ಡಾ.ಕೋಟ ಶಿವರಾಮ ಕಾರಂತರು 1934-37ರಲ್ಲಿ ಸಾಕಷ್ಟು ಧನವ್ಯಯ ಮತ್ತು ವಿಶೇಷ ಪರಿಶ್ರಮದಿಂದ-ಕ್ರೌನ್ ಕ್ವಾರ್ಟ್ರೋ ಆಕಾರದ 1800 ಪುಟಗಳನ್ನೊಳಗೊಂಡ 3 ಸಂಪುಟಗಳಲ್ಲಿ ‘ಬಾಲಪ್ರಪಂಚ’ವನ್ನು ರಚಿಸಿರುವ ಸಾಹಸ ಸಣ್ಣದೇನಲ್ಲ. ಬಾಲಪ್ರಪಂಚದ ಪ್ರತಿಯೊಂದು ಸಂಪುಟದಲ್ಲೂ ಕಾರಂತರೇ ಬಿಡಿಸಿರುವ ನೂರಾರು ಚಿತ್ರಗಳೂ, ಅವರೇ ತೆಗೆದಿರುವ ನೂರಾರು ಛಾಯಾಚಿತ್ರಗಳೂ ಇವೆ. ಇಂಗ್ಲೆಂಡ್, ಕೆನಡಾ, ಸಂಯುಕ್ತ ಅಮೆರಿಕಾ, ಜರ್ಮನಿ, ಸ್ವಿಜರ್‌ಲೇಂಡ್, ನಾರ್ವೆ, ಚೀನಾ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಮತ್ತು ಭಾರತ ದೇಶದ ಹಲವಾರು ಔದ್ಯಮಿಕ ಸಂಸ್ಥೆಗಳಿಂದ, ಸರಕಾರಗಳಿಂದ, ರೈಲ್ವೇ ಕಂಪೆನಿಗಳಿಂದ, ಸಂಶೋಧನಾಲಯಗಳಿಂದ, ವಸ್ತು ಸಂಗ್ರಹಾಲಯಗಳಿಂದ, ಮೃಗಾಲಯಗಳಿಂದ ಮತ್ತು ಇನ್ನೂ ಹಲವಾರು ಮೂಲಗಳಿಂದ ವಿಷಯ ಸಂಗ್ರಹಣೆ ಮತ್ತು ಚಿತ್ರ ಸಂಗ್ರಹಣೆಯ ಕೆಲಸವನ್ನು ಕಾರಂತರು ಈ ಮಕ್ಕಳ ವಿಶ್ವಕೋಶಕ್ಕಾಗಿ ನಿರ್ವಹಿಸಿದ್ದಾರೆ. ‘ಬಾಲಪ್ರಪಂಚ’ ಕನ್ನಡ ಭಾಷೆಯ ಪ್ರಪ್ರಥಮ ವಿಶ್ವಕೋಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.