Description
ಎಣ್ಣೆಗೆಂಪು ಬಣ್ಣದ, ಮೊಂಡು ಮೂಗಿನ ಪುಟ್ಟಲಕ್ಷ್ಮಿ ಅಪ್ಪ-ಅಮ್ಮನ ಮುದ್ದಿನ ಮಗಳು. ಎರಡನೆಯ ತರಗತಿಯಲ್ಲೋ ಮೂರನೇ ತರಗತಿಯಲ್ಲೋ ಓದುತ್ತಿರುವ ಪುಟ್ಟಲಕ್ಷ್ಮಿ ತುಂಬಾ ಧೈರ್ಯವಂತೆ. ಕನ್ನಡದ ಬಗ್ಗೆ ಅಪಾರ ಪ್ರೇಮವುಳ್ಳ ಪುಟ್ಟಲಕ್ಷ್ಮಿಯನ್ನು ಕಂಡರೆ ಶಾಲೆಯ ಸರ್‌ಗಳಿಗೂ ಮಿಸ್‌ಗಳಿಗೂ ಮತ್ತು ಆಯಮ್ಮಗಳಿಗೂ ತುಂಬಾ ಇಷ್ಟ. ಪುಟ್ಟಲಕ್ಷ್ಮಿಗೆ ಅಪ್ಪ-ಅಮ್ಮನ ಮೇಲೆ, ಗುರುಹಿರಿಯರ ಬಗ್ಗೆ ಅಪಾರ ಪ್ರೀತಿ, ಗೌರವ. ಅವಳು ಯಾವತ್ತೂ ಯಾರಿಗೂ ಸುಳ್ಳಾಡಿದವಳಲ್ಲ. ಸತ್ಯದ ಮೇಲಿನ ಪ್ರೀತಿಯಿಂದಾಗಿ ಪುಟ್ಟಲಕ್ಷ್ಮಿ ಯಾವ ಮಾತನಾಡಿದರೂ ಅದು ನಿಜವಾಗುತ್ತದೆ. ಅವಳ ಮಾತಿಗೆ ಒಳ್ಳೆಯದನ್ನು ಕಾಪಾಡುವ ಹಾಗೂ ಕೆಟ್ಟದ್ದನ್ನು ಶಿಕ್ಷಿಸುವ ಶಕ್ತಿಯಿದೆ. ಉಳಿದಂತೆ ಅವಳು ನಮ್ಮೆಲ್ಲರ ಮನೆಯಲ್ಲಿ ಇರುವ ಚುರುಕು ಹುಡುಗಿಯರನ್ನು ಹೋಲುತ್ತಾಳೆ. ಅಂದಹಾಗೆ, ಪುಟ್ಟಲಕ್ಷ್ಮಿಯ ಸ್ನೇಹ ಮಾಡಿದವರಿಗೆ ಕಷ್ಟನಷ್ಟಗಳ ಭಯ ಇರುವುದಿಲ್ಲ. ಅವಳ ಗೆಳೆತನ ಮಾಡಿಕೊಳ್ಳುವ ಸುಲಭದ ದಾರಿಯೆಂದರೆ ಇಲ್ಲಿನ ಕಥೆಗಳನ್ನು ಓದುವುದು ಹಾಗೂ ಮಕ್ಕಳಿಗೆ ಓದಿಹೇಳುವುದು.