Description
ಕೃತಿಯ ಲೇಖಕರಾದ ಎಸ್. ಮಂಜುನಾಥ (ಜ. 1980), ಬಳ್ಳಾರಿಯಲ್ಲಿ ‘ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ’ ಸ್ಥಾಪಿಸಿ ಸುಮಾರು ಕಳೆದೆರಡು ದಶಕಗಳಿಂದ ವಿದ್ಯಾರ್ಥಿ, ಯುವಜನ ಮತ್ತು ಜನಸಾಮಾನ್ಯರಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ಬೆಳೆಸುವಲ್ಲಿ ಸಕ್ರಿಯರಾಗಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಬೆಂಗಳೂರಿನ ಜವಾಹರ್‌ಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಿಂದ (ಜೆ.ಎನ್.ಸಿ.ಎ.ಎಸ್.ಆರ್.) ಸ್ನಾತಕೋತ್ತರ ಡಿಪ್ಲೋಮಾಗಳನ್ನು ಪಡೆದಿದ್ದಾರೆ. ಭಾರತರತ್ನ ಪ್ರೊ. ಸಿ. ಎನ್. ಆರ್. ರಾವ್ ಜೊತೆ ಸಂಶೋಧನೆಗಳನ್ನು ಕೈಗೊಂಡು ಸಂಶೋಧನಾ ಪ್ರಬಂಧಗಳನ್ನು ಸಹ ಪ್ರಕಟಿಸಿರುವರು.
ನವಕರ್ನಾಟಕ ಪ್ರಕಾಶನದ ‘ವಿಜ್ಞಾನ-ತಂತ್ರಜ್ಞಾನ ಪದ ಸಂಪದ’ಕ್ಕೆ ಡಾ। ಇಂದುಮತಿ ಸಿ. ಎನ್. ಆರ್. ರಾವ್ ಜೊತೆಗೂಡಿ ನ್ಯಾನೊತಂತ್ರಜ್ಞಾನ ವಿಭಾಗವನ್ನು ಮಂಜುನಾಥ್ ರಚಿಸಿರುವರು. ನವಕರ್ನಾಟಕ ಪ್ರಕಾಶನದಿಂದ ಈಗಾಗಲೇ ಇವರ ‘ಚುಕ್ಕಿ ಚಂದ್ರಮ’, ‘ವೈಚಾರಿಕ ಕವನಗಳು’ ಮತ್ತು ‘ಬೆಂಕಿ ಬಾಣಲೆ’ ಕವನ ಸಂಕಲನಗಳು ಓದುಗರ ಗಮನ ಸೆಳೆದಿವೆ. ಜೆ.ಎನ್.ಸಿ.ಎ.ಎಸ್.ಆರ್. ಸಮ್ಮರ್ ರಿಸರ್ಚ್ ಫೆಲೋಷಿಪ್, ಅಂತಾರಾಷ್ಟ್ರೀಯ ವಸ್ತುವಿಜ್ಞಾನ ಕೇಂದ್ರದಿಂದ ಸ್ನಾತಕೋತ್ತರ ಡಿಪ್ಲೋಮಾ ಫೆಲೋಷಿಪ್, ಡಾ| ಎಚ್. ನರಸಿಂಹಯ್ಯ ಪ್ರಶಸ್ತಿ, ಬಳ್ಳಾರಿ ಜಿಲ್ಲಾ ಯುವಪ್ರಶಸ್ತಿ, ಆಜೂರ ಪುಸ್ತಕ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ, ಶ್ರೀಮತಿ ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ – ಮಂಜುನಾಥರಿಗೆ ಸಂದಿರುವ ಪ್ರಮುಖ ಗೌರವಗಳಾಗಿವೆ.
ಪ್ರಸ್ತುತ ಇವರ ‘ಚಿವ್ ಚಿವ ಗುಬ್ಬಿ’ ಕೃತಿಯಲ್ಲಿ ಎಳೆಯ ಮಕ್ಕಳಿಗೆ ಕನ್ನಡ ಪ್ರೇಮದ ಜೊತೆ ಗೇಯತೆಯಿಂದ ತಾವಾಗಿಯೇ ಹಾಡುವಂತ ಗೀತೆಗಳನ್ನು ರಚಿಸಿರುವರು. ಇವರ ಈ ಗೀತೆಗಳಿಗೆ ದೇಶದ ಖ್ಯಾತ ವ್ಯಂಗ್ಯಚಿತ್ರಗಾರ ಶ್ರೀ ಬಿ.ಜಿ.ಗುಜ್ಜಾರಪ್ಪನವರ ಆಕರ್ಷಕ ಚಿತ್ರಗಳು ಕೃತಿಯ ಸೊಬಗನ್ನು ಹೆಚ್ಚಿಸಿವೆ.